ಚಿತ್ರಶಾಲೆಗಳು
ಪಾಶ್ಚಾತ್ಯರಲ್ಲಿ ಚಿತ್ರಶಾಲೆ (ಆರ್ಟ್ ಗ್ಯಾಲರಿ) ಎಂಬ ಶಬ್ದವನ್ನು ವಸ್ತುಸಂಗ್ರಹಾಲಯ (ಮ್ಯೂಸಿಯಮ್) ಎಂಬುದಕ್ಕೆ ಸಂವಾದಿಯಾಗಿ ಬಳಸುವುದು ವಾಡಿಕೆ. ಚಿತ್ರಶಾಲೆ ಅಥವಾ ಮ್ಯೂಸಿಯಮ್ ಎಂದರೆ ಕಲಾಕೃತಿಗಳನ್ನೋ ಪುರಾತನ ವಸ್ತುಗಳನ್ನೋ ವ್ಯವಸ್ಥಿತವಾಗಿ ಸಂಗ್ರಹಿಸಿ ಪ್ರದರ್ಶಿಸುವ ಸಂಸ್ಥೆ ಅಥವಾ ಕಟ್ಟಡ ಆಗಬಹುದು

ಪುರಾತನ ಗ್ರೀಸಿನಲ್ಲಿ ಮ್ಯೂಸಿಯಮ್ ಎಂದರೆ ಮ್ಯೂಸಸ್ ಅಥವಾ ಕಲಾದೇವಿಯರ ದೇವಾಲಯ. ಕಲೆ ಸಾಹಿತ್ಯ ಮುಂತಾದ ವಿದ್ವತ್ ವಿಚಾರಗಳಿಗೆ ಮುಡಿಪಿಟ್ಟ ಸಂಸ್ಥೆ ಎನ್ನುವ ಅರ್ಥವಿತ್ತು. ಎರಡನೆಯ ಟಾಲಮಿ ಕ್ರಿ. ಪೂ. ಮೂರನೆಯ ಶತಮಾನದ ಅಲೆಕ್ಸಾಂಡ್ರಿಯಾದಲ್ಲಿ ಸ್ಥಾಪಿಸಿದ ಮ್ಯೂಸಿಯಮ್ ಎಲ್ಲಕ್ಕಿಂತ ಅತ್ಯಂತ ಪುರಾತನವಾದುದೆಂದು ಹೇಳಬಹುದು. ಚಿತ್ರಶಾಲೆ ಮ್ಯೂಸಿಯಮಿನಿಂದ ವಿಭಿನ್ನವಾದುದು ಎಂಬ ಕಲ್ಪನೆಯ ಉಗಮವನ್ನು ಪಾಲಿಗ್ನೌಟಸ್ ಎಂಬಾತನ ಚಿತ್ರಗಳನ್ನು ಅಥೆನ್ಸಿನ ಆ್ಯಕ್ರಪೊಲಿಸ್ ಎಂಬ ಸ್ಥಳದಲ್ಲಿ ಪ್ರದರ್ಶಿಸಿದಾಗ ಬಳಸಿದ ಪಿನೋಕೊತಿಕಾ ಎಂಬ ಶಬ್ದದಲ್ಲಿ ಗುರುತಿಸಬಹುದು. ಈಗಲೂ ಪಿನೋಕೊತಿಕಾ ಎಂದರೆ ಚಿತ್ರಶಾಲೆ ಎನ್ನುವ ಅರ್ಥ ಬಳಕೆಯಲ್ಲಿದೆ. ಪುರಾತನ ರೋಮ್ ನಗರದ ಭವ್ಯ ಕಂಬಸಾಲುಗಳ ಮುಂದೆ ಚಿತ್ರಕಲಾಕೃತಿಯನ್ನು ಪ್ರದರ್ಶನಕ್ಕೆ ಇಡುವ ಸಂಪ್ರದಾಯವಿತ್ತು.

ರೆನೆಸಾನ್ಸ್ ಯುಗಕ್ಕೆ ಪೂರ್ವದಲ್ಲೇ, ಅಪೂರ್ವ ಕಲಾವಸ್ತುಗಳನ್ನೂ ಅವಶೇಷಗಳನ್ನೂ ಖಾಸಗಿಯಾಗಿ ಸಂಗ್ರಹಿಸುವ ಸಂಪ್ರದಾಯ ಬೆಳೆದುಬಂದಿತ್ತು. ರೆನೆಸಾನ್ಸ್ ಕಾಲದಲ್ಲಿ ಮ್ಯೂಸಿಯಮ್ ಎಂದರೆ ಹ್ಯೂಮನಿಸ್ಟ್ ವಿದ್ವಾಂಸರು ಅಥವಾ ಶ್ರೀಮಂತರು ಕೂಡಿಟ್ಟುಕೊಂಡ ಪುರಾತನ ನಾಣ್ಯಗಳು, ಹಸ್ತಪ್ರತಿಗಳು, ಚಿತ್ರಗಳು, ಶಾಸನಗಳು, ಅತ್ಯಮೂಲ್ಯ ಮಣಿರತ್ನಗಳು ಮುಂತಾದ ವಸ್ತುಗಳ ಪ್ರದರ್ಶನ ಶಾಲೆ ಎಂಬ ಅರ್ಥವೂ ಉದ್ಭವಿಸಿತು. ಚಿತ್ರಕಲಾಕೃತಿಗಳನ್ನು ಅವುಗಳ ಪ್ರಾಚೀನತೆ ಹಾಗೂ ಕಲಾತ್ಮಕತೆಗೋಸ್ಕರವೇ ಸಂಗ್ರಹಿಸುವ ಪರಂಪರೆ ಪ್ರಾರಂಭವಾದದ್ದು ಹದಿನಾರನೆಯ ಶತಮಾನದಲ್ಲಿ, ಇಟಲಿಯಲ್ಲಿ. ಇಂಥ ಸಂಗ್ರಹಣೆಗಾಗಿ ವಸ್ತುಗಳನ್ನು ಆರಿಸುವಾಗ ರೆನೆಸಾನ್ಸ್ ವಿದ್ವಾಂಸರು ಹಾಕಿಕೊಂಡ ಸೂತ್ರಗಳೇ ಆಯ್ಕೆಯ ಮಾನದಂಡಗಳೆಂದು ಅನಂತರ ಒಪ್ಪಿಕೊಳ್ಳಲಾಯಿತು. ರೆನೆಸಾನ್ಸ್ ಕಾಲದ ಇಂಥ ಸಂಗ್ರಹಣಾಲಯಗಳೇ ಆಧುನಿಕ ಚಿತ್ರಶಾಲೆಗಳಿಗೆ ಪ್ರೇರಣೆಯಾಯಿತು. ಶ್ರೀಮಂತರ ಖಾಸಗಿ ಚಿತ್ರಸಂಗ್ರಹಣೆಗಳು ರಾಷ್ಟ್ರೀಯ ಚಿತ್ರಸಂಗ್ರಹಾಲಯಗಳಾಗಿ ರೂಪುಗೊಂಡವು. ಅವುಗಳಲ್ಲಿ ಮುಖ್ಯವಾದ ಕೆಲವು ಲೋಕವಿಖ್ಯಾತ ಚಿತ್ರಶಾಲೆಗಳನ್ನು (ಆರ್ಟ್ ಗ್ಯಾಲರೀಸ್) ಕುರಿತ ವಿವರಗಳು ಇಲ್ಲಿವೆ.

	ಲೂವರ್ ಚಿತ್ರಶಾಲೆ : ಪ್ಯಾರೀಸ್ ನಗರದಲ್ಲಿರುವ ಫ್ರಾನ್ಸಿನ ರಾಷ್ಟ್ರೀಯ ಇತಿಹಾಸ ಮತ್ತು ಸಾಂಸ್ಕøತಿಕ ಪರಂಪರೆಯನ್ನು ಸೂಕ್ಷ್ಮರೂಪದಲ್ಲಿ ಪ್ರತಿನಿಧಿಸುವಂತಿರುವ ಈ ಚಿತ್ರಶಾಲೆ ಕ್ರಿ.ಶ 1190ರಲ್ಲಿ ಫಿಲಿಪ್ ಆಗಸ್ಟಸ್ ಕಟ್ಟಿಸಿದ ಅರಮನೆಯ ಒಂದು ಭಾಗವಾಗಿತ್ತು. ಕ್ರಿ. ಶ. 1400ರ ಸುಮಾರಿನಲ್ಲಿ ಐದನೆಯ ಚಾಲ್ರ್ಸ್ ಈ ಕಟ್ಟಡವನ್ನು ಸುಂದರವಾಗಿ ಮಾರ್ಪಡಿಸಿದ. ಕ್ರಮೇಣ ಇದರಿಂದ ಬಿಬ್ಲಿಯೋತಿಕ್ ನ್ಯಾಶನಲ್ ಎಂಬ ಪುಸ್ತಕಾಲಯದ ಸ್ಥಾಪನೆಗೂ ನಾಂದಿಯಾಯಿತು. ಮೊದಲನೆಯ ಫ್ರಾನ್ಸಿನ ದೊರೆ ಹಳೆಯ ಕಟ್ಟಡವನ್ನು ಕೆಡವಿಸಿ ಅದರ ಸ್ಥಳದಲ್ಲಿ ಲೂವರ್ ಅರಮನೆಯನ್ನು ಕಟ್ಟಿಸಿದ. ಹಲವಾರು ಚಿತ್ರಕೃತಿಗಳನ್ನು ಸಂಗ್ರಹಿಸಿ ಇಟಲಿಯ ಶ್ರೀಮಂತ ಅರಸರಂತೆ ಅವನೂ ಕಲಾವಿದರಿಗೆ ಆಶ್ರಯವನ್ನು ನೀಡಿ, ರಾಜಮನೆತನದ ಸಾಂಸ್ಕøತಿಕ ಹಿರಿಮೆಯನ್ನು ಉಜ್ವಲಗೊಳಿಸಿದ. ಲಿಯೊನಾರ್ಡೊಡವಿಂಚಿ, ಆಂದ್ರಿಯಾ ದೆಲ್ ಸಾರ್ಟೋ, ಪ್ರೈಮಾಟೀಚೋ ಮತ್ತು ಚಲ್ಲಿನಿ ಮುಂತಾದ ಮಹಾನ್ ಕಲಾವಿದರು ಅವನ ಆಶ್ರಯಕ್ಕೆ ಪಾತ್ರರಾಗಿದ್ದರು. ಅವನು ಸಂಗ್ರಹಿಸಿದ ಚಿತ್ರಗಳಲ್ಲಿ ಮುಖ್ಯವಾದುವುಗಳೆಂದರೆ, ಲಿಯನಾರ್ಡುವಿನ ಲೋಕವಿಖ್ಯಾತ ಮೋನಾಲಿಸ, ರ್ಯಾಫಲ್‍ನ ಬೆಲ್ಜಾರ್ದಿನೀರ್ ಮುಂತಾದ ಕೃತಿಗಳು. ಲೂವರ್ ಅರಮನೆಯ ರಾಷ್ಟ್ರೀಯ ಚಿತ್ರಸಂಗ್ರಹಾಲಯವಾದದ್ದು ಆ ಕಾಲದಲ್ಲೇ.

	ಹದಿನಾರನೆಯ ಶತಮಾನದ ಮಧ್ಯದಲ್ಲಿ ಪ್ರಾರಂಭವಾದ ಈ ಅರಮನೆಯ ಜೀರ್ಣೋದ್ದಾರ ಕಾರ್ಯ ಸುಮಾರು ಒಂದು ಶತಮಾನದವರೆಗೂ ನಡೆಯಿತು. 1641ರಲ್ಲಿ ಪೌಸಿನ್ ಎಂಬಾತ (ಮುಂದೆ ಲೂವರ್ ಚಿತ್ರಶಾಲೆಯ ಅಂಗವಾಗಿ ಮಾರ್ಪಟ್ಟ) ಗ್ರ್ಯಾಂಡ್ ಗ್ಯಾಲರಿಯನ್ನು ಅಲಂಕರಣಗೊಳಿಸಿದ. ಹದಿನಾಲ್ಕನೆಯ ಕಾಲ್ಬರ್ಟ್ ದೊರೆ ಅಲ್ಲಿಯವರೆಗೆ ಇನ್ನೂರು ಚಿತ್ರಕೃತಿಗಳನ್ನು ಮಾತ್ರ ಪಡೆದಿದ್ದ ಲೂವರ್ ಚಿತ್ರಶಾಲೆಗೆ ಎರಡು ಸಾವಿರ ಚಿತ್ರಗಳನ್ನು ಸೇರಿಸಿದ. ಅವನು 1661ರಲ್ಲಿ ಕಾರ್ಡಿನಲ್ ಮಸûರಿನ್ನನ ಬಳಿ ಇದ್ದ ಅತ್ಯಮೂಲ್ಯ ಕೃತಿಗಳನ್ನು ಖರೀದಿ ಮಾಡಿ ಅದನ್ನು ಈ ಚಿತ್ರಶಾಲೆಗೆ ದಾನಮಾಡಿದ. ಅವನು ಜಬಾಕ್ ಎಂಬ ಹಣವಂತನ ಬಳಿಯಲ್ಲಿದ್ದ ಶ್ರೇಷ್ಠಚಿತ್ರಗಳನ್ನು ಮೈಕಲ್ ಡಿ ಮರೋಲ್ಸೆ ರಚಿಸಿದ ಚಿತ್ರಗಳ ನೂರಾರು ಪ್ರತಿರೂಪಗಳನ್ನು ಕೊಂಡು ತಂದು ಸೇರಿಸಿದ. 1661ರಲ್ಲಿ ಮೊತ್ತಮೊದಲಬಾರಿಗೆ ಈ ಚಿತ್ರಶಾಲೆಯನ್ನು ಸ್ವಲ್ಪಕಾಲ ಸಾರ್ವಜನಿಕರಿಗಾಗಿ ತೆರೆದಿಡಲಾಯಿತು. 1673ರಿಂದ ಫ್ರೆಂಚ್ ಅಕಾಡೆಮಿಯ ಚಿತ್ರಪ್ರದರ್ಶನಗಳನ್ನು ಅಲ್ಲಿ ಪ್ರಾರಂಭಿಸಲಾಯಿತು. 1664ರಲ್ಲಿ ಕಾಲ್ಬರ್ಟ್ ದೊರೆ ಬರ್ನಿನಿ ಎಂಬ ಕಲಾವಿದನನ್ನು ಆಹ್ವಾನಿಸಿ ಚಿತ್ರಶಾಲೆಯ ನವೀಕರಣದ ಕೆಲಸವನ್ನು ಅವನಿಗೆ ವಹಿಸಿದ. ಆದರೆ ಕಟ್ಟಡದ ಕೆಲಸ ಪೂರ್ಣಗೊಳ್ಳಲಿಲ್ಲ.

ಫ್ರೆಂಚ್ ಮಹಾಕ್ರಾಂತಿಯ ಅನಂತರ ಲೂವರ್ ಚಿತ್ರಶಾಲೆಯನ್ನು ರಾಷ್ಟ್ರೀಯ ಸಂಸ್ಥೆಯೆಂದು ಭಾವಿಸಿ ಸಾರ್ವಜನಿಕರಿಗಾಗಿ ತೆರೆದರು. ನೆಪೋಲಿಯನ್ ತನ್ನ ದಂಡಯಾತ್ರೆಯಲ್ಲಿ ಗೆದ್ದ ಪ್ರದೇಶಗಳಿಂದ ವಶಪಡಿಸಿಕೊಂಡು ತಂದ ಚಿತ್ರಕೃತಿಗಳನ್ನು ಇಲ್ಲಿ ಪ್ರದರ್ಶಿಸಲಾಯಿತು. ಇವುಗಳಲ್ಲಿ ಹಲವನ್ನು ನೆಪೋಲಿಯನ್ನನ ಪತನದ ತರುವಾಯ ಆಯಾ ದೇಶಗಳಿಗೆ ಹಿಂದಿರುಗಿಸಿದರೂ ಲೋಕಪ್ರಸಿದ್ಧ 'ವೀನಸ್ ಡಿಮಲೋ ದಂತ ಕೆಲವು ಅಮೃತ ಶಿಲೆಯ ಶಿಲ್ಪಕೃತಿಗಳನ್ನು ಅಲ್ಲೇ ಉಳಿಸಿಕೊಳ್ಳಲಾಯಿತು.
1806ರಲ್ಲಿ ಪರ್ಸಿಯರ್ ಮತ್ತು ಫಾಂಟೈನ್ ಎಂಬುವರು ಲೂವರ್ ಅರಮನೆಯ ಉತ್ತರಕ್ಕೆ ಒಂದು ಚಿತ್ರಶಾಲೆಯನ್ನು ಕಟ್ಟಿ ಅದನ್ನು ಮುಖ್ಯ ಕಟ್ಟಡಕ್ಕೆ ಸೇರಿಸಿದರು. ಲೂವರ್ ಚಿತ್ರಶಾಲೆಯಲ್ಲಿ ಸಮಗ್ರ ಯೂರೋಪಿಯನ್ ಕಲಾಪರಂಪರೆಯನ್ನು ಸೂಚಿಸುವಂಥ ಚಿತ್ರಪ್ರದರ್ಶನವನ್ನು ಪ್ರಾರಂಭಿಸಿದವ ಮೂರನೆಯ ನೆಪೋಲಿಯನ್. ಅವನು ಲುಕ್ಸಂಬರ್ಗ್ ಅರಮನೆಯಿಂದ ಮೆಡಿಚಿ ಕಾಲದ ಚಿತ್ರಗಳನ್ನು ಲೂವರ್‍ಗೆ ರವಾನಿಸಿದ. ಕಾಲಕ್ರಮೇಣ ಲುಕ್ಸಂಬರ್ಗ್ ಚಿತ್ರಶಾಲೆಯಲ್ಲಿ ಸಮಕಾಲೀನ ಫ್ರೆಂಚ್ ಕಲಾಸಂಪ್ರದಾಯದ ಚಿತ್ರಗಳನ್ನು ಪ್ರದರ್ಶಿಸುತ್ತಿದ್ದು,ಅಲ್ಲಿ ಒಪ್ಪಿ ಸ್ವೀಕರಿಸಿದ ಮೇರುಕೃತಿಗಳನ್ನು ಮಾತ್ರ ಲೂವರ್ ಚಿತ್ರಶಾಲೆಗೆ ವರ್ಗಾಯಿಸುತ್ತಿದ್ದರು.1929ರ ವರೆಗೆ ಫ್ರೆಂಚ್ ಇಂಪ್ರೆಷನಿಸ್ಟ್ ಚಿತ್ರಗಳನ್ನು ಅಲ್ಲಿ ಪ್ರದರ್ಶಿಸಲು ಅನುಮತಿ ದೊರೆಯಲ್ಲಿಲ್ಲವೆನ್ನುವುದು ಅಂದಿನ ವೈಚಾರಿಕ ಗೊಂದಲವನ್ನು ಎತ್ತಿತೋರಿಸುತ್ತದೆ. ಎರಡನೆಯ ಮಹಾಯುದ್ದದ ಆನಂತರ ಇಂಪ್ರೆಷನಿಸ್ಟ್ ಚಿತ್ರಗಳನ್ನು ಅಲ್ಲಿಂದ ಬೇರೆಡೆಗೆ ವರ್ಗಾಯಿಸಲಾಯಿತು.	 

	ಊಫಿಟ್ಜೀ ಚಿತ್ರಶಾಲೆ : ಇಟಲಿಯ ಫ್ಲಾರೆನ್ಸಿನಲ್ಲಿರುವ ಊಫಿಟ್ಜೀ ಚಿತ್ರಶಾಲೆಯಲ್ಲಿ ಮುಖ್ಯವಾಗಿ ಇಟಲಿಯ ಕಲಾವಿದರ ಕೃತಿಗಳನ್ನು ಪ್ರದರ್ಶಿಸಿದ್ದಾರೆ. ಲೊರೆಂಜೊ ಡಿ ಮೆಡಿಚಿ ಮನೆತನದವರು ಊಫಿಟ್ಜೀ ಅರಮನೆಯ ಮಹಡಿ ಮೇಲಿನ ಗ್ಯಾಲರಿಯಲ್ಲಿ ಸಂಗ್ರಹಿಸಿದ್ದ ಚಿತ್ರಗಳು ಈ ಸಂಗ್ರಹಾಲಯಕ್ಕೆ ಮೂಲ ದ್ರವ್ಯವಾದವು. ಈ ಗ್ಯಾಲರಿಯನ್ನು ಕ್ರಿ.ಶ 1560-74 ರ ಅವಧಿಯಲ್ಲಿ ವಸಾóರಿ ಎಂಬಾತ ಮೊದಲನೆಯ ಕೋಸೆóಮೋ (ಟಸ್ಕನಿ ರಾಜ್ಯದ ಗ್ರ್ಯಾಂಡ್ ಡ್ಯೂಕ್) ಎಂಬುವನಿಗಾಗಿ ಕಟ್ಟಿದ. 1565ರಲ್ಲಿ ವಸಾóರಿ ಪಾಂಟವೆಚಿಯೋ ಎಂಬ ಅರಮನೆಯ ಮೇಲುಗಡೆ ಮೊಗಸಾಲೆಯನ್ನು ಕಟ್ಟಿ ಊಫಿಟ್ಜೀ ಮತ್ತು ಪಿಟ್ಟಿ ಅರಮನೆಗಳೆರಡನ್ನೂ ಸೇರಿಸಿದ. ಊಫಿಟ್ಜೀ ಚಿತ್ರಾಲಯದಲ್ಲಿ ಮೂರನೆಯ ಡ್ಯೂಕ್ ಕೋಸೆóಮೋ (1642-1723) ರಚಿಸಿದ ಸುಪ್ರಸಿದ್ಧ ಆತ್ಮಚಿತ್ರಣಗಳು(ಸೆಲ್ಫ್ ಪೋರ್ಟ್‍ರೇಟ್ಸ್) ಇಂದಿಗೂ ಚಿರಸ್ಥಾಯಿಯಾಗಿ ಉಳಿದಿದೆ. ಮೆಡಿಚಿ ಮನೆತನದ ಶ್ರೀಮಂತರು ಸಾಹಿತ್ಯ ಕಲೆಗಳ ಆಶ್ರಯದಾತರಾಗಿದ್ದರು. ಶ್ರೇಷ್ಠ ಕಲಾಭಿಜ್ಞರೂ, ರಸಿಕರು ಆಗಿದ್ದ ಆಮನೆತನದ ಡ್ಯೂಕರು ಪ್ರಾಚೀನ ಕ್ಲಾಸಿಕಲ್ ಶಿಲ್ಪಕೃತಿಗಳನ್ನು ಸಮಕಾಲೀನ ಇಟಲಿಯ ಹಾಗೂ ಬೇರೆ ದೇಶಗಳ ಕಲಾವಿದರ ಉತ್ತಮ ಚಿತ್ರಕೃತಿಗಳನ್ನು ಸೇರಿಸಿ ಇಟ್ಟುಕೊಂಡಿದ್ದರು. ಅಲ್ಲಲ್ಲಿ ಹರಡಿಹೋಗಿ ನಷ್ಟಕ್ಕೀಡಾಗಿದ್ದ ಮೆಡಿಚಿ ಅರಮನೆಯ ಅನಾದೃಶ ಕಲಾಸಂಪತ್ತನ್ನು ಮೊದಲನೆಯ ಕೋಸೆóಮೋ ಸಾಕಷ್ಟು ಶ್ರಮದಿಂದ ರಕ್ಷಿಸಿ ಸ್ವಾಧೀನಪಡಿಸಿಕೊಂಡ. ಅನಂತರ ಅವೆಲ್ಲವನ್ನೂ ಒಟ್ಟು ಮಾಡಿ ಮೆಡಿಚಿ ಗಾರ್ಡರೋಬಾ ಎಂಬ ಚಿತ್ರಸಮುದಾಯವನ್ನು ಊಫಿಟ್ಜೀ ಅರಮನೆಯಲ್ಲಿ ಶೇಖರಿಸಿದ. ಈ ವೈಭವಯುತ ಕಲಾಶ್ರೀಯನ್ನು ಫರ್ಡಿನೆಂಡ್ ದೊರೆಗಳು ಮೂರನೆಯ ಕೋಸೆóಮೋ ತನ್ನ ಚಿಕ್ಕಪ್ಪ ಕಾರ್ಡಿನಲ್ ಲಿಯೋಪಾಲ್ಡೋನ ಸಂಗ್ರಹಾಲಯದಿಂದ ಪಡೆದ ಆತ್ಮಚಿತ್ರಣಗಳನ್ನು, ಡಚ್ ವರ್ಣಚಿತ್ರಗಳನ್ನೂ ಇಟಲಿಯ ರೆನಸಾನ್ಸ್ ಯುಗದ ಉತ್ಕøಷ್ಟ ತೈಲಚಿತ್ರಗಳನ್ನೂ ತಂದು ಸೇರಿಸಿದ. ಫ್ರೆಂಚ್ ಮಹಾಕ್ರಾಂತಿಯ ಕಾಲದಲ್ಲಿ ನಷ್ಟವಾಗಿದ್ದ ಈ ಚಿತ್ರಶಾಲೆಯನ್ನು 19ನೆಯ ಶತಮಾನದಲ್ಲಿ ಪುನರುಜ್ಜೀವನಗೊಳಿಸಿ, ಕಳೆದುಹೋಗಿದ್ದ ಕಲಾಕೃತಿಗಳನ್ನು ಹಿಂಪಡೆಯಲು ಅವಿರತ ಪ್ರಯತ್ನ ಮಾಡಲಾಯಿತು. ಅನಂತರ ಊಫಿಟ್ಜೀಯಲ್ಲಿನ ಪ್ರಾಚ್ಯವಸ್ತುಗಳನ್ನೂ ಮಧ್ಯಯುಗದ ಮತ್ತು ರೆನೆಸಾನ್ಸ್ ಶಿಲ್ಪಕಲಾಕೃತಿಗಳನ್ನು ಅತ್ಯುತ್ತಮ ಪ್ರಾಯೋಗಿಕ ಚಿತ್ರಕೃತಿಗಳನ್ನು ಅಲ್ಲಿಂದ ಬಾರ್ಗೆಲ್ಲೋ ಮುಂತಾದ ಬೇರೆಬೇರೆ ಸಂಗ್ರಹಾಲಯಗಳಿಗೆ ಸಾಗಿಸಲಾಯಿತು. ಇಟಲಿಯ ಚರ್ಚುಗಳನ್ನು ಹತ್ತಿಕ್ಕಿ, ಸಂನ್ಯಾಸಿಮಠಗಳನ್ನು ವಶಪಡಿಸಿಕೊಂಡಾಗ ಆ ಸಂಸ್ಥೆಗಳಲ್ಲಿ ಸಂರಕ್ಷಿಸಲಾಗಿದ್ದ ಸಾವಿರಾರು ಚಿತ್ರಗಳನ್ನು ತಂದು ಊಫಿಟ್ಜೀ ಚಿತ್ರಶಾಲೆಗೆ ಕೊಡಿಸಲಾಯಿತು. 1919ರಲ್ಲಿ ದಿ ಗ್ಯಾಲರಿ ಆಫ್ ಫೈನ್ ಆರ್ಟ್‍ನ್ನು ಉಫಿಟ್ಜೀಯ ಒಂದು ಭಾಗವನ್ನಾಗಿ ಅಳವಡಿಸಲಾಯಿತು. ಈ ಎಲ್ಲಾ ಕಾರಣಗಳಿಂದ, ಹದಿಮೂರನೆಯ ಶತಮಾನದಿಂದ ಹದಿನೆಂಟನೆಯ ಶತಮಾನದ ವರೆಗಿನ ಇಟಲಿಯ ಚಿತ್ರಕಲೆ ಹೇಗೆ ವಿಕಾಸ ವಾಯಿತೆಂಬುದನ್ನು ಅಲ್ಲಿನ ಚಿತ್ರಗಳ ಮೂಲಕ ನಾವು ಇಂದಿಗೂ ಊಫಿಟ್ಜೀ ಚಿತ್ರ ಶಾಲೆಯಲ್ಲಿ ಕಾಣಬಹುದು.

	ವ್ಯಾಟಿಕನ್ ಸಂಗ್ರಹಾಲಯಗಳು : ಹದಿನೈದನೆಯ ಶತಮಾನದ ಪ್ರಾರಂಭದಿಂದಲೂ ರೋಮಿನ ಹಲವು ಪೋಪ್ ಪ್ರಭುಗಳು ಸಂಗ್ರಹಿಸಿದ್ದ ಅಸಂಖ್ಯಾತ ಕಲಾವಸ್ತುಗಳು ಚಿತ್ರಗಳು ವ್ಯಾಟಿಕನ್ ಮ್ಯೂಸಿಯಮ್‍ನಲ್ಲಿ ಕಾಣಸಿಗುತ್ತವೆ. ಧಾರ್ಮಿಕ ಮುಖಂಡರಾಗಿದ್ದ ತಮಗೆ ಕೊಡುಗೆಯಾಗಿ ದೊರೆಯುತ್ತಿದ್ದ ಹೇರಳ ವಸ್ತುಗಳನ್ನು (1870 ರಲ್ಲಿ ಇಟಲಿಯ ಏಕೀಕರಣವಾಗುವವರೆಗೆ ವ್ಯಾಟಿಕನ್ ಧರ್ಮಪ್ರಭುಗಳೇ ರೋಮಿನ ಪೇಗನ್ ಅವಶೇಷಗಳ ಪಾಲಕರಾಗಿದ್ದುದರಿಂದ ಆಗಾಗ ತಮಗೆ ದೊರೆಯುತ್ತಿದ್ದ) ಪುರಾತನ ಕಲಾಕೃತಿಗಳನ್ನು ಪೋಪ್ ಗುರುಗಳು ವ್ಯಾಟಿಕನ್ ಸಂಗ್ರಹಾಲಯದಲ್ಲಿ ಸೇರಿಸುತ್ತಾ ಬಂದರು. ದೇಶಭ್ರಷ್ಟನಾಗಿದ್ದ ಪೋಪ್ 1420ರಲ್ಲಿ ತನ್ನ ಸ್ಥಾನಕ್ಕೆ ಹಿಂದಿರುಗಿದ ಮೇಲೆ ತನ್ನ ಪದವಿಯ ಘನತೆ ಗೌರವಗಳನ್ನು ಹೆಚ್ಚಿಸಬೇಕೆಂಬ ಉದ್ದೇಶದಿಂದ ಕೆಲವು ಸಾಂಸ್ಕøತಿಕ ಚಟುವಟಿಕೆಗಳನ್ನು ಪ್ರಾರಂಭಿಸಿದ. ಇವರಿಗೆ ಫ್ಲಾರೆನ್ಸಿನವರಂತೆ ತಾವೂ ತಮ್ಮ ಪ್ರದೇಶದ ನಗರಗಳನ್ನು ಸುಂದರಗೊಳಿಸಬೇಕೆನ್ನಿಸಿತು. ಸ್ವಲ್ಪಕಾಲದಲ್ಲಿ ಎರಡನೆಯ ಪಯಸ್, ಐದನೆಯ ಮಾರ್ಟಿನ್‍ರಂಥ ಪೋಪ್ ಪ್ರಭುಗಳು ಫ್ಲಾರೆನ್ಸಿನ ಶ್ರೀಮಂತ ಶಮಶಥಾನಿಕರಷ್ಟೇ ಕಲಾಭಿಮಾನಿಗಳೆಂದು ಪ್ರಸಿದ್ಧರಾದರು 1476ರಲ್ಲಿ ಪೋಪ್ ನಾಲ್ಕನೆಯ ಸಿಕ್ಸಟಿಸ್, ವ್ಯಾಟಿಕನ್ ಪುಸ್ತಕಾಲಯವನ್ನು ಕಟ್ಟಿಸಿ ಸಿಸ್ಟೈನ್ ಮಂದಿರದಲ್ಲಿ ಉಬ್ಬು ಚಿತ್ರಗಳನ್ನು ರಚಿಸುವ ವ್ಯವಸ್ಥೆಮಾಡಿದ. ರೆನೆಸಾನ್ಸ್ ಕಾಲದ ಪೋಪ್ ಗುರುಗಳಲ್ಲಿ ಅತ್ಯಂತ ಶ್ರೇಷ್ಠನೆನಿಸಿಕೊಂಡ ಎರಡನೆಯ ಜೂಲಿಯಸ್ (1505-1613) ಸಿಸ್ಟೈನ್ ಮಂದಿರದ ಒಳಮಾಳಿಗೆಯಲ್ಲಿ ಮೈಕಲ್ ಏಂಜಲೋವಿನ ವರ್ಣರಂಜಿತ ಚಿತ್ರಗಳನ್ನು ಬರೆಯಿಸಿದ ರಾಫೆಲ್‍ನಿಂದ ತನ್ನ ಪುಸ್ತಕ ಭಂಡಾರ ಹಾಗೂ ಸಂದರ್ಶನ ಕೋಣೆಗಳಲ್ಲಿ ಅದ್ಭುತವರ್ಣಚಿತ್ರಗಳನ್ನು ಬರೆಯಿಸುವ ವ್ಯವಸ್ಥೆ ಮಾಡಿದ. ತನ್ನ ವೈಭವಯುತ ಜೀವನಕ್ಕೆ ಸಂಬಂಧಿಸಿದ ಚಿತ್ರಗಳನ್ನೂ ಬರೆಯಿಸಿ ತನ್ನ ಹೆಸರು ಚಿರಸ್ಥಾಯಿಯಾಗುವಂತೆ ಮಾಡಿಕೊಂಡ. ಪ್ರಾಚ್ಯಸಂಶೋಧಕರು ಅಗೆದು ತೆಗೆದಿದ್ದ ಲಾವೋಕೂನ್, ಅಪಾಲೋ ಬೆಲ್ವಡಿಯರ್, ವೀನಸ್ ದೇವತೆಗಳ ಶಿಲ್ಪಾಕೃತಿಗಳನ್ನು ಪಡೆದುಕೊಂಡು ಸಂಗ್ರಹಾಲಯಕ್ಕೆ ಸೇರಿಸಿದ. ಐದನೆಯ ಚಾಲ್ರ್ಸ್ ರೋಮ್ ನಗರವನ್ನು ಮುತ್ತಿ ಕೊಳ್ಳೆಹೊಡೆದಾಗ ಪೋಪ್ ಗುರುಗಳ ಸಾಂಸ್ಕøತಿಕ ಚಟುವಟಿಕೆಗಳಿಗೆ ಪ್ರಬಲವಾದ ಪೆಟ್ಟುಬಿತ್ತು. ಆದರೂ ಪುರಾತನ ರೋಮ್ ಪ್ರದೇಶದಲ್ಲಿ ಉತ್ಖನನ ಕಾರ್ಯಗಳು ನಡೆಯುತ್ತಲೇ ಇದ್ದವು. ಮೈಕೆಲ್ ಎಂಜಲೋ ಸಿಸ್ಟೈನ್ ಮಂದಿರದಲ್ಲಿ ತನ್ನ ಲೋಕ ವಿಖ್ಯಾತ ದಿ ಲಾಸ್ಟ್ ಜಡ್ಜ್‍ಮೆಂಟ್ ಚಿತ್ರವನ್ನು ಬರೆದದ್ದು ಆ ಕಾಲದಲ್ಲೇ. ಕೌಂಟರ್ ರೆಫರ್ಮೇಷನ್ ಕಾಲದಲ್ಲಿ ಕಲೆಯ ಪುನರುಜ್ಜೀವನ ಕಾರ್ಯಗಳು ಕುಂಠಿತವಾದವು. ಬೆಲ್ವೇಡಿಯರ್ ಶಿಲ್ಪಾಕೃತಿಗಳನ್ನು ನೋಡುವವರಿಲ್ಲದೆ ಅವು ಸುಮಾರು 700 ವರ್ಷಗಳ ಕಾಲ ಮಂದಿರದೊಳಗೆ ಧೂಳುಹಿಡಿದು ಬಿದ್ದಿದ್ದವು. ಅನಂತರ ಈ ಹಲವು ಕೃತಿಗಳನ್ನು ಕ್ಯಾಪಿಟೋಲಿನ ಅರಮನೆಗೆ ಸಾಗಿಸಿ ಅಲ್ಲಿ ಅವುಗಳನ್ನು ಸಂರಕ್ಷಿಸಿ ಇಡುವ ವ್ಯವಸ್ಥೆ ಮಾಡಲಾಯಿತು.

	ಹದಿನೆಂಟನೆಯ ಶತಮಾನದ ಅನಂತರ ಬಂದ ಪೋಪ್ ಪ್ರಭುಗಳು ವ್ಯಾಟಿಕಾನ್ ಸಂಗ್ರಹಾಲಯಗಳ ನವೀಕರಣದಲ್ಲಿ ತೊಡಗಿ ಹೊಸ ಹೊಸ ಕಲಾಕೃತಿಗಳನ್ನು ಸಂಗ್ರಹಿಸಿದರು. ಅತ್ಯಮೂಲ್ಯ ಕೃತಿಗಳನ್ನು ಅಲ್ಲಿಂದ ಯಾರೂ ಕದ್ದು ಒಯ್ಯದಂತೆ ನೋಡಿಕೊಂಡರು. ಪೋಪ್ ಹನ್ನೊಂದನೆಯ ಕ್ಲೆಮೆಂಟ್ ತಾನು (ಕಾರ್ಟಿನಲ್ ಆಲ್ಟಿಯಾಗಿದ್ದಾಗ) ಸ್ವಂತವಾಗಿ ಪರಿಚಯಿಸಿದ ಅಮೂಲ್ಯ ಚಿತ್ರಸಂಗ್ರಹಣೆಯನ್ನು ಇಡಲು ಹೊಸ ಚಿತ್ರಶಾಲೆಯನ್ನೇ ಕಟ್ಟಬೇಕಾಯಿತು. ಮ್ಯೂಸಿಯೋ ಕ್ಲೆಮೆಂಟಿನೋ ಎಂಬ ಹೆಸರಿನ ಕಲಾವಸ್ತು ಸಂಗ್ರಹಾಲಯವನ್ನು ಪ್ರಪ್ರಥಮವಾಗಿ 1773ರಲ್ಲಿ ಸಾರ್ವಜನಿಕರಿಗಾಗಿ ತೆರೆದಿಡಲಾಯಿತು. ಏಳನೆಯ ಪೋಪ್ ಪಯಸ್ಸನ ಕಾಲದಲ್ಲಿ ಬ್ರೊಮಾಂಟ್ ಗ್ಯಾಲರಿಯನ್ನು ಒಳಗೊಂಡಂತೆ ಬೆಲ್ವೆಡಿಯರ್ ಕಟ್ಟಡವನ್ನೂ ವ್ಯಾಟಿಕನ್ ಮಂದಿರವನ್ನು ಒಂದುಗೂಡಿಸಲಾಯಿತು. ಸಾವಿರಾರು ಪುರಾತನ ವಸ್ತುಗಳನ್ನು ಸಂಗ್ರಹಿಸಲಾಯಿತು. ಬೇರೆಬೇರೆ ಕಲಾವಸ್ತುಗಳ ಪ್ರದರ್ಶನಕ್ಕಾಗಿ ಪ್ರತ್ಯೇಕವಾದ ಗ್ಯಾಲರಿಯನ್ನು ಕಟ್ಟಿಸಲಾಯಿತು. ಉದಾಹರಣೆಗೆ ಮ್ಯೂಸಿಯೋ ಗ್ರಿಗೋರಿಯಾನ ಎತ್ರುಸ್ಕೋ ಎಂಬ ಕಡೆ ಎಟ್ರುಸ್ಕನ್ ವಸ್ತುಗಳನ್ನು ಇಡಲಾಯಿತು. ಈ ಸಂಗ್ರಹಾಲಯ ಸಮುದಾಯಕ್ಕೆ ಒಂದು ಸೊಗಸಾದ ಚಿತ್ರಶಾಲೆಯನ್ನು ಸೇರಿಸಲಾಯಿತು. ಮೊಟ್ಟಮೊದಲು ತೀರ ಅವ್ಯವಸ್ಥಿತವಾಗಿದ್ದ ಈ ಚಿತ್ರಶಾಲೆಯಲ್ಲಿ ರಾಫಲ್‍ನ ಟ್ರಾನ್ಸ್‍ಫಿಗೇಷನ್‍ನಂಥ ಶ್ರೇಷ್ಠ ಕಲಾಕೃತಿಗಳನ್ನು ಸೇರಿಸಿದ್ದು ಅಪೂರ್ವ ಸಂಗತಿ. 1909ರಲ್ಲಿ ಈ ಚಿತ್ರಶಾಲೆಯನ್ನು ಸಂಪೂರ್ಣವಾಗಿ ವ್ಯವಸ್ಥೆಗೊಳಿಸಿ (ನೆಪೋಲಿಯನ್ ಕಾಲದಲ್ಲಿ ಹಲವು ಪೋಪ್ ಗುರುಗಳ ನಿವಾಸದಲ್ಲಿ ಹಂಚಿ ಹರಡಿಹೋಗಿದ್ದ) ಶ್ರೇಷ್ಠ ಚಿತ್ರಕೃತಿಗಳನ್ನು ಮತ್ತೆ ಪಡೆದು ಈ ಚಿತ್ರಶಾಲೆಯಲ್ಲಿ ತಂದಿರಿಸಲಾಯಿತು. ರೆನೆಸಾನ್ಸ್ ಯುಗದ ಹಲವು ಶ್ರೇಷ್ಠ ಮೂಲ ಕೃತಿಗಳನ್ನು ಇಲ್ಲಿ ಕಾಣಬಹುದು.
ಫ್ರೆಂಚ್ ಮಹಾಕ್ರಾಂತಿಯ ನಂತರ ಖಾಸಗಿ ಕಲಾಸಂಗ್ರಹಣೆಯ ಮಾದರಿಯನ್ನು ಅನುಸರಿಸಿ ಸರ್ಕಾರಗಳೇ ಈ ಕಾರ್ಯವನ್ನು ನಿರ್ವಹಿಸಲು ಮುಂದೆಬಂದವು. ರಾಷ್ಟ್ರಪ್ರೇಮದಿಂದ ತಮ್ಮ ದೇಶಗಳ ಪುರಾತನ ಪರಂಪರೆಯ ಬಗ್ಗೆ ಮೂಡಿದ ಹೆಮ್ಮೆ ಅಭಿಮಾನದಿಂದ ಅವು ಪ್ರೇರಣೆ ಪಡೆದವು. ನೆಪೋಲಿಯನ್ನನ ಆಕ್ರಮಣಕ್ಕೆ ತುತ್ತಾದ ದೇಶಗಳಲ್ಲಿ ಶ್ರೀಮಂತ ಮನೆತನದ ಕಲಾವಸ್ತುಗಳನ್ನು ಆಯಾ ದೇಶದ ಸರ್ಕಾರಗಳ ವಶಕ್ಕೆ ವಹಿಸಲಾಯಿತು. ಇದರಿಂದ ಅಲ್ಲಿಯವರೆಗೆ ಶ್ರೀಮಂತರ ಸ್ವತ್ತಾಗಿದ್ದ ಕಲಾವಸ್ತುಗಳು ಸಾರ್ವಜನಿಕರ ಆಸಕ್ತಿಯನ್ನೂ ಸೆಳೆಯುವ ಸಾಧನಗಳಾದವು. ಅಂಥ ಪ್ರೇರಣೆಯಿಂದ ಹೊಸದಾಗಿ ರೂಪಿತವಾದ ಕೆಲವು ಪ್ರಸಿದ್ಧ ಚಿತ್ರಶಾಲೆಗಳನ್ನು ಕುರಿತು ಕೆಲವು ವಿವರಗಳು ಹೀಗಿವೆ.

	ರಿಕ್ಸ್ ಮ್ಯೂಸಿಯಮ್: ಇದು ಆಮ್ಸಸ್ಟರ್‍ಡ್ಯಾಮ್‍ನಲ್ಲಿರುವ ಹಾಲೆಂಡಿನ ರಾಷ್ಟ್ರೀಯ ಪ್ರಾಚ್ಯ ಸಂಗ್ರಹಾಲಯ. ಇದು ಉಗಮವಾದ್ದು ಹಾಲೆಂಡಿನ ದೊರೆ ಲೂಯಿ ನೆಪೋಲಿಯನ್ 1808ರಲ್ಲಿ ಸ್ಥಾಪಿಸಿದ ರಾಯಲ್ ಮ್ಯೂಸಿಯಮಿನಲ್ಲಿ, ಜೋವಾನ್ ಮೀರ್‍ಮನ್ ಎಂಬ ಅಧಿಕಾರಿಯ ನೇತೃತ್ವದಲ್ಲಿ ಹೇಗ್‍ನಲ್ಲಿದ್ದ ನ್ಯಾಶನಲ್ ಆರ್ಟ್ ಗ್ಯಾಲರಿಯಿಂದಲೂ ಕಲಾಕೃತಿಗಳನ್ನು ತಂದು ಇಲ್ಲಿ ಸಂಗ್ರಹಿಸಲಾಯಿತು. ಆಮ್‍ಸ್ಟರ್‍ಡ್ಯಾಮ್ ನಗರದವರು ರೆಮಬ್ರ್ಯಾಂಟ್‍ನ ದಿ ನೈಟ್ ವಾಚ್, ದಿ ಗೌವರ್ನರ್ ಆಫ್ ದಿ ಕ್ಲಾತ್ ಗಿಲ್ಡ ಮುಂತಾದ ಲೋಕೋತ್ತರ ವರ್ಣಚಿತ್ರಗಳನ್ನೂ ಸಹ ರಿಕ್ಸ್ ಚಿತ್ರಾಲಯಕ್ಕೆ ದಾನವಾಗಿ ಕೊಟ್ಟರು. ಹಾಲೆಂಡಿನ ಕಲಾವಿದರ ಕೃತಿಗಳ ಜತೆಯಲ್ಲಿ ಬೇರೆಬೇರೆ ದೇಶಗಳ ಸಮಕಾಲೀನ ಕಲಾವಿದರು ಬರೆದ ಚಿತ್ರಗಳನ್ನೂ ಅಲ್ಲಿ ಇಡಬೇಕೆಂಬ ಉದ್ದೇಶದಿಂದ ಟಿಪ್ಪನ್‍ಹ್ಯೂಸ್ ಎಂಬಲ್ಲಿ 1817ರಲ್ಲಿ ರಿಕ್ಸ್ ಮ್ಯೂಸಿಯಮ್ಮನ್ನು ಸ್ಥಾಪಿಸಲಾಯಿತು. ಸ್ಥಳಸಂಕೋಚದಿಂದಾಗಿ ಅವ್ಯವಸ್ಥೆಯಲ್ಲಿದ್ದ ಈ ಸಂಸ್ಥೆಯನ್ನು 1885ರಲ್ಲಿ ಹಾಲೆಂಡಿನ ಆರ್ಟ್ ಕಮಿಶನ್ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಮೇಲೆ ಅದಕ್ಕೆ ಹೊಸಜೀವ ಬಂತು. ಒಂದು ಚಿತ್ರದ ಯೋಗ್ಯತೆಯಿರುವುದು ಅದರ ಕಲಾಸೌಂದರ್ಯದಲ್ಲೇ ವಿನಃ ಅದರ ಐತಿಹಾಸಿಕತೆ, ಪ್ರಾಚೀನಪರಂಪರೆ, ಮುಂತಾದ ಅಂಶಗಳಲ್ಲಲ್ಲ ಎಂಬ ಹೊಸ ದೃಷ್ಟಿಯಿಂದ ಪ್ರೇರಣೆಗೊಂಡ ಯುವಕರ ಪೀಳಿಗೆ ರಿಕ್ಸ್ ಸಂಗ್ರಹಾಲಯದ ಮೇಲೆ ವಿಚಾರದ ಪ್ರಭಾವ ಬೀರಿತು. ಪ್ರಾಚೀನ ಡಚ್ ಜಾನಪದ ಸಂಪ್ರದಾಯದ ಹಲವು ಅಪೂರ್ವ ಚಿತ್ರಗಳನ್ನು (ಟಚ್ ಪ್ರಿಮಿಟಿವ್ಸ್) ಇಲ್ಲಿ ನೋಡಬಹುದು. 1972 ರ ನಂತರ ಈ ಚಿತ್ರಶಾಲೆಯನ್ನು ಆಧುನಿಕಗೊಳಿಸಿ ಬೇರೆ ದೇಶಗಳ ಶ್ರೇಷ್ಠ ಕೃತಿಗಳನ್ನು ತಂದಿಡಲಾಯಿತು. ಕಳೆದುಹೋಗಿದ್ದ ಅನೇಕ ಅಪೂರ್ವ ಕಲಾಕೃತಿಗಳನ್ನು ದಿ ಫೌಂಡೇಷನ್ ಫಾರ್ ನೆದರ್‍ಲ್ಯಾಂಡ್ಸ್ ಆರ್ಟ್ ಪೊಸೆóಷನ್ ಎಂಬ ಸಂಸ್ಥೆಯ ನೆರವಿನಿಂದ ಹಿಂದಕ್ಕೆ ಪಡೆಯಲಾಯಿತು. ರಿಕ್ಸ್ ಗ್ಯಾಲರಿಯಲ್ಲಿ ವರ್ಮಿಯರ್, ರೆಂಬ್ರ್ಯಾಂಟ್ ಮುಂತಾದವರ ಅಪೂರ್ವ ಕೃತಿಗಳೂ ಡಚ್ ಪ್ರಿಮಿಟಿವ್ ಚಿತ್ರಗಳೂ ಸೇರಿವೆ. ಇದು ಜಗತ್ತಿನ ಶ್ರೇಷ್ಠ ಚಿತ್ರಶಾಲೆಗಳಲ್ಲೊಂದೆನ್ನುತ್ತಾರೆ.

	ಬ್ರೆರಾ ಚಿತ್ರಶಾಲೆ : ಇಟಲಿಯ ಮಿಲಾನಿನಲ್ಲಿರುವ ಈ ಚಿತ್ರಶಾಲೆ 1809ರಲ್ಲಿ ಪ್ರಾರಂಭವಾದರೂ ಅದು ತೀರಾ ಇತ್ತೀಚಿನದು ಎನ್ನಬಹುದು. ಮೊಟ್ಟಮೊದಲು ಬ್ರೆರಾ ಅರಮನೆ ಜೆಸೂಯಿಟ್ ಧರ್ಮಗುರುಗಳಿಗೆ ಸೇರಿತ್ತು. ಚಕ್ರವರ್ತಿನಿ ಮರೆಯಾ ತೆರೆಸಾ ಈ ಅರಮನೆಯಲ್ಲಿ ಕೆಲವು ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಲು ಉದ್ದೇಶಿಸಿದ್ದಳು. ಮಿಲಾನ್ ನಗರದ ಫ್ರೆಂಚರಿಗೆ ಸೇರಿದ ಪ್ರದೇಶದ ರಾಜಧಾನಿಯಾದ ಮೇಲೆ ಈ ಅರಮನೆಯನ್ನು ಚಿತ್ರಶಾಲೆಯನ್ನಾಗಿ ಪರಿವರ್ತಿಸಿ, ಉತ್ತರ ಇಟಲಿಯಲ್ಲಿ ನಿಷೇಧಗೊಳಿಸಲಾದ ಧರ್ಮಮಂದಿರಗಳಿಂದ ತಂದ ಅನೇಕ ಚಿತ್ರಗಳನ್ನು ಇಲ್ಲಿ ಇಡಲಾಯಿತು. ಇದರಿಂದಾಗಿ ರಾಫೆಲ್‍ನ ದಿ ಮ್ಯಾರೇಜ್ ಆಫ್ ದಿ ವರ್ಜಿನ್, ಪಿಯರೋ ಡೆಲ್ಲಾ ಫ್ರಾನ್ಸಿಸ್ಕೋನ ದಿ ಮೆಡೋನಾ ವಿತ್, ದಿ ಏಂಜಲ್ಸ್ ಅಂಡ್ ವಿತ್ ದಿ ಡ್ಯೂಕ್ ಮುಂತಾದ ಉದ್ದಾಮ ರೆನೆಸಾನ್ಸ್ ಕೃತಿಗಳನ್ನೂ ವೆನೀಷಿಯನ್ ಪಂಥದ ಚಿತ್ರಗಳನ್ನೂ ಬ್ರೆರಾ ಚಿತ್ರಶಾಲೆಯಲ್ಲಿ ನೋಡುವಂತಾಯಿತು.

	ವೆನಿಸ್ ನಗರದ ಅಕಾಡೆಮಿಯಾ ಡಿ ಬೆಲ್ಲ ಆರ್ಟಿ ಎಂಬುದು ಅಲ್ಲಿನ ನಗರಾಡಳಿತ ಸಂಸ್ಥೆಯ ಆಶ್ರಯದಲ್ಲಿರುವ ಒಂದು ಶ್ರೇಷ್ಠ ಚಿತ್ರಶಾಲೆ. 1807 ರಲ್ಲಿ ನೆಪೋಲಿಯನ್‍ನಿಂದ ಸ್ಥಾಪಿಸಲ್ಪಟ್ಟ ಈ ಗ್ಯಾಲರಿಯಲ್ಲಿ ಹಳೆಯ ಅಕಾಡೆಮಿಯಿಂದ, ಗಯಾಲರಿಯಾ ಡಗೆಸ್ಸಿತಿಂದ ಸಂಚಯಿಸಿದ ಚಿತ್ರಗಳಿವೆ. ನೆಪೋಲಿಯನ್ನನ ಪತನದ ಅನಂತರ ಹಿಂದಕ್ಕೆ ಪಡೆಯಲಾದ ಮತ್ತು ಆಸ್ಟ್ರಿಯದವರು ಹಿಂದಕ್ಕೆ ಕೊಟ್ಟ ವೆನೀಷಿಯನ್ ಶೈಲಿಯ ಚಿತ್ರಗಳು ಈ ಚಿತ್ರಶಾಲೆಯಲ್ಲಿನ ಅತ್ಯಂತ ಆಕರ್ಷಕ ವಸ್ತುಗಳಾಗಿವೆ.

	ನ್ಯಾಶನಲ್ ಗ್ಯಾಲರಿ: ಲಂಡನ್ನಿನ ಈ ವಿಖ್ಯಾತ ಚಿತ್ರಶಾಲೆ ಒಂದು ಇತಿಹಾಸ ಪ್ರಸಿದ್ಧ ಸಂಸ್ಥೆ. ಇಂಗ್ಲೆಂಡಿನಲ್ಲಿ ರಾಷ್ಟ್ರೀಯ ಚಿತ್ರಶಾಲೆಯೊಂದನ್ನು ಸ್ಥಾಪಿಸಿ ದೇಶದ ಕಲಾಕೃತಿಗಳನ್ನು ಬೇರೆ ದೇಶದವರು ಕೊಳ್ಳೆ ಹೊಡೆಯದಂತೆ ಮಾಡಬೇಕೆಂದು ಜಾನ್ ವಿಲ್ಕಿಸ್ ಒಂದು ಉಗ್ರ ಚಳುವಳಿಯನ್ನೇ ಹೂಡಿದ. ಸರ್ ರಾಬರ್ಟ್ ವಾಲ್ಪೋಲ್ ಸಂಗ್ರಹಿಸಿದ್ದ ಉತ್ಕøಷ್ಟ ಚಿತ್ರಗಳನ್ನು ರಷ್ಯದ ರಾಣಿ ಕೈಆತರಿನಳಿಗೆ ಮಾರಿದ ಸಂದರ್ಭದಲ್ಲಿ ರೊಚ್ಚಿಗೆದ್ದ ಜಾನ್ ವಿಲ್ಕಿಸ್ ರಾಷ್ಟ್ರೀಯ ಚಿತ್ರಶಾಲೆಯ ಕಲ್ಪನೆಯನ್ನು ಪಾರ್ಲಿಮೆಂಟಿನ ಮುಂದಿಟ್ಟ, ತಾವೇ ಖಾಸಗಿಯಾಗಿ ಚಿತ್ರಸಂಗ್ರಹಣೆಯನ್ನು ಇಟ್ಟುಕೊಂಡಿದ್ದ ಇಂಗ್ಲೆಂಡಿನ ಶ್ರೀಮಂತ ವರ್ಗ ಈ ಚಳುವಳಿಗೆ ಬೆಂಬಲ ನೀಡಲಿಲ್ಲ. ಆದರೆ ಸುಪ್ರಸಿದ್ಧ ಕಲಾವಿದರಾದ ಸರ್ ಜೋóಷುವ ರೆನಲ್ಡ್ಸ, ಬೆಂಜಮಿನ್ ವೆಸ್ತ್, ಜೇಮ್ಸ ಬ್ಯಾರಿ, ಜಾನ್ ಓಪಿ ಮುಂತಾದವರು ವಿಲ್ಕಿಸನ ನಿಲುವನ್ನು ಸಮರ್ಥಿಸಿದರು. ಇದರ ಫಲವಾಗಿ ಇಂಗ್ಲೆಂಡಿನಲ್ಲಿ ದಿ ಬ್ರಿಟಿಷ್ ಇನ್‍ಸ್ಟಿಟ್ಯೂಟ್ ಫಾರ್ ಪ್ರಮೋಷನ್ ಆಫ್ ದಿ ಫೈನ್ ಆರ್ಟ್ ಎಂಬ ಹೊಸ ಸಂಸ್ಥೆಯು ಹುಟ್ಟಿಕೊಂಡಿತು. ಸರ್ ಜಾರ್ಜ್ ಬೋಮೆಂಟ್ ಮತ್ತು ಜಾನ್ ಜೂಲಿಯಸ್ ಆಂಗರ್‍ಸ್ಟಿನ್ ಎಂಬ ಶ್ರೀಮಂತರ ಬಳಿಯಿದ್ದ ಶ್ರೇಷ್ಠ ಚಿತ್ರ ಸಂಗ್ರಹವನ್ನು ಕೊಂಡು ಇಂಗ್ಲೆಂಡಿನಲ್ಲಿ ಪ್ರಪ್ರಥಮವಾಗಿ ರಾಷ್ಟ್ರೀಯ ಚಿತ್ರಶಾಲೆಯೊಂದನ್ನು ಸ್ಥಾಪಿಸಲಾಯಿತು. ಇದರಲ್ಲಿ ಹದಿನೆಂಟನೆಯ ಮತ್ತು ಹತ್ತೊಂಬತ್ತನೆಯ ಶತಮಾನದ ಹಲವು ಪ್ರಸಿದ್ಧ ಐರೋಪ್ಯ ಚಿತ್ರಕಾರರ ಕೃತಿಗಳಿವೆ. ಕಲೆಯ ಅಧ್ಯಯನವನ್ನು ಶಿಕ್ಷಣಪದ್ಧತಿ ಭಾಗವನ್ನಾಗಿ ಅಳವಡಿಸುವ ಉದ್ದೇಶದಿಂದ ಸಂಗ್ರಹಿಸಲಾದ ಹಲವು ಕಲಾತ್ಮಕ ವಸ್ತುಗಳನ್ನು ಇಲ್ಲಿ ಕಾಣಬಹುದು.

	ಟೇಟ್ ಗ್ಯಾಲರಿ : ಲಂಡನ್ನಿನ ಈ ಚಿತ್ರಶಾಲೆಯಲ್ಲಿ ಇಂಗ್ಲೆಂಡಿನ ಬೇರೆ ಬೇರೆ ಪಂಥದ ಕಲಾವಿದರುಗಳು ರಚಿಸಿದ ಚಿತ್ರಗಳಿವೆ. ನ್ಯಾಷನಲ್ ಗ್ಯಾಲರಿಯಲ್ಲಿ ಇಂಗ್ಲೀಷ್ ಕಲಾವಿದರ ಚಿತ್ರಗಳಿಗೆ ಸಾಕಷ್ಟು ಪ್ರಾತಿನಿಧ್ಯವಿಲ್ಲವೆಂಬ ಕಾರಣದಿಂದ, ವಿಶಿಷ್ಟವಾದ ಇನ್ನೊಂದು ಚಿತ್ರಶಾಲೆಯನ್ನು ಪ್ರಾರಂಭಿಸಲಾಯಿತು. 1890ರಲ್ಲಿ ಹೆನ್ರಿ ಟೇಟ್ ತಾನು ಸಂಗ್ರಹಿಸಿದ್ದ ಆಧುನಿಕ ಬ್ರಿಟಿಷ್ ಚಿತ್ರಗಳನ್ನು ದಾನವಾಗಿಕೊಡಲು ಮುಂದೆ ಬಂದ. 1790ರ ಪೂರ್ವದ ತೊಂಬತ್ತಾರು ಬ್ರಿಟಿಷ್ ಚಿತ್ರಗಳು ಇಲ್ಲಿವೆ. ಇಂಗ್ಲೆಂಡಿನಲ್ಲಿ ಎರಡು ರಾಷ್ಟ್ರೀಯ ಚಿತ್ರಶಾಲೆಗಳಿರಬೇಕೆಂದೂ ಹೊಸ ಗ್ಯಾಲರಿಯಲ್ಲಿ ಬ್ರಿಟಿಷ್ ಚಿತ್ರಕಾರರ ಕೃತಿಗಳಿಗೆ ಮಾತ್ರ ಅವಕಾಶವಿರಬೇಕೆಂದೂ ಒಪ್ಪಿಕೊಂಡಿದ್ದರಿಂದ ಜಗತ್ಪ್ರಸಿದ್ಧ ಪುರಾತನ ಕೃತಿಗಳನ್ನು ನ್ಯಾಷನಲ್ ಗ್ಯಾಲರಿಯಲ್ಲಿಟ್ಟು ಆಧುನಿಕ ಇಂಗ್ಲೀಷ್ ಕೃತಿಗಳಿಗೆ ಟೇಟ್ ಗ್ಯಾಲರಿಯಲ್ಲಿ ಸ್ಥಳಾವಕಾಶ ಮಾಡಿಕೊಡಲಾಗಿದೆ. 1937ರಿಂದೀಚೆಗೆ ಅಲ್ಲಿ ಆಧುನಿಕ ಬ್ರಿಟೀಷ್ ಹಾಗೂ ವಿದೇಶಿ ಕಲಾವಿದರ ಶಿಲ್ಪಕೃತಿಗಳನ್ನು ಇಡಲಾಗಿದೆ. 1949ರಿಂದೀಚೆಗೆ ನಡೆಯುತ್ತಿರುವ ಭಾರಿ ಪ್ರದರ್ಶನದಲ್ಲಿ ಮ್ಯಾಥುಸ್ಮಿತ್, ಸ್ಟಾನ್ಲೆ ಸ್ಪೆನ್ಸರ್, ವಿಂಡ್ ಹ್ಯಾಮ್ ಲೂವಿಸ್ ಮುಂತಾದವರ ಕೃತಿಗಳನ್ನು ಪ್ರತ್ಯೇಕವಾಗಿ ಪ್ರದರ್ಶಿಸುವ ವಾಡಿಕೆ ಇಟ್ಟುಕೊಂಡಿದ್ದಾರೆ.

	ದಿ ವಿಕ್ಟೋರಿಯ ಆಲ್ಬರ್ಟ್ ಮ್ಯೂಸಿಯಮ್ : ಇದರ ಭಾಗವಾಗಿರುವ ಚಿತ್ರಶಾಲೆ (ಲಂಡನ್) ಒಂದು ವಿಶಿಷ್ಟ ಶೈಕ್ಷಣಿಕ ಉದ್ದೇಶದಿಂದ ಪ್ರಾರಂಭವಾದ ಸಂಸ್ಥೆ. ಎಲ್ಲ ಕಾಲ ದೇಶಗಳ ಎಲ್ಲ ಪಂಥಗಳ ಕಲಾವಿದರು ರಚಿಸಿದ ಕೃತಿಗಳನ್ನು ಜನಪ್ರಿಯಗೊಳಿಸಿ ಜನತೆಯ ಅರಿವನ್ನು ಹೆಚ್ಚಿಸಬೇಕು, ಕಲೆಯಲ್ಲಿನ ಅನ್ವಯಿಕ ಸೂತ್ರಗಳನ್ನೂ, ವಿಚಾರಗಳನ್ನೂ ಔದ್ಯೋಗಿಕ ಉತ್ಪನ್ನಗಳ ತಯಾರಿಕೆಗಾಗಿ ಬಳಸಿಕೊಳ್ಳಬೇಕು-ಎಂದರೆ, ಬ್ರಿಟನ್ನಿನ ಔದ್ಯೋಗಿಕ ವ್ಯಾಪಾರಗಳು ಹೆಚ್ಚುವಂತೆ ಕಲೆಯ ವಿಚಾರಗಳನ್ನು ನಿತ್ಯ ಬಳಕೆಯ ಔದ್ಯೋಗಿಕ ಉತ್ಪನ್ನಗಳ ತಯಾರಿಕೆಗೆ ಅನ್ವಯಿಸುವಂತೆ ಬಳಸಿಕೊಳ್ಳಬೇಕು ಎಂಬ ಉದ್ದೇಶದಿಂದ ಪ್ರೇರಣೆ ಪಡೆದು, ದಿ ಗ್ರೇಟ್ ಎಕ್ಸಿಬಿಷನ್ ಉತ್ಸವಕ್ಕಾಗಿ ಸಂಗ್ರಹಿಸಲಾಗಿದ್ದ ಎಲ್ಲಾ ವಸ್ತುಗಳನ್ನು ಐದು ಸಾವಿರ ಪೌಂಡುಗಳಿಗೆ ಕೊಳ್ಳಲಾಯಿತು. ಈ ವಸ್ತುಗಳನ್ನು ಪಡೆದುಕೊಡು ಪ್ರಾರಂಭವಾದ ಸಂಸ್ಥೆಯೇ ದಿ ವಿಕ್ಟೋರಿಯ ಆಲ್ಬರ್ಟ್ ಮ್ಯೂಸಿಯಮ್ ಎಂಬ ಸಂಗ್ರಹಾಲಯವಾಗಿ ಬೆಳೆಯಿತು. ಸ್ವಲ್ಪ ಕಾಲದ ಆನಂತರ ದಕ್ಷಿಣ ಕೆನ್‍ಸಿಂಗ್‍ಟನ್‍ನಲ್ಲಿದ್ದ ಕಲಾಸಂಗ್ರಹಾಲಯವನ್ನೂ ಇದಕ್ಕೆ ಜೋಡಿಸಲಾಯಿತು. 1909ರಿಂದೀಚೆಗೆ ಅದು ಕೇವಲ ಕಲಾವಸ್ತು ಸಂಗ್ರಹಾಲಯವಾಗಿ ಮಾರ್ಪಟ್ಟು ಅದರಲ್ಲಿನ ವೈಜ್ಞಾನಿಕ, ಶೈಕ್ಷಣಿಕ ವಸ್ತುಗಳನ್ನು ಬೇರೊಂದು ವೈಜ್ಞಾನಿಕ ಮ್ಯೂಸಿಯಮಿಗೆ ಸಾಗಿಸಿದರು. ಈ ಸಂಗ್ರಹಾಲಯದಲ್ಲಿ ಹದಿನೇಳನೆಯ ಶತಮಾನದಿಂದೀಚಿನ ಚಿತ್ರಗಳು, ಶಿಲ್ಪಕೃತಿಗಳು, ಬ್ರಿಟನ್ನಿನಲ್ಲಿ ರಚಿತವಾದ ಕಿರು ಚಿತ್ರಗಳು, ಜಲವರ್ಣ ಚಿತ್ರಗಳು, ಬೆಳ್ಳಿಯ ಕೆತ್ತನೆಯ ಕೆಲಸದ ಕೃತಿಗಳು ಮುಂತಾದುವನ್ನು ಸಂಗ್ರಹಿಸಿ ಇಡಲಾಗಿದೆ. ಇಲ್ಲಿನ ಕುಂಭ ಕಲಾವಸ್ತು ಸಂಗ್ರಹಣೆಯಂತೂ ಜಗತ್ತಿನಲ್ಲೇ ಅತ್ಯುತ್ತಮವಾದುದು ಎನ್ನುವುದುಂಟು.

	ಆಧುನಿಕ ಕಾಲದಲ್ಲಿ ಚಿತ್ರಶಾಲೆಗಳನ್ನು ಅತ್ಯಂತ ಸೂಕ್ಷ್ಮವೂ ವೈಜ್ಞಾನಿಕವೂ ಆದ ರೀತಿಯಲ್ಲಿ ಅಣಿಗೊಳಿಸಿರುವುದನ್ನು ಅಮೆರಿಕದಲ್ಲಿ ನೋಡಬಹುದು. ಮ್ಯೂಸಿಯಮ್ ವಿಜ್ಞಾನ ಪರಿಣತಿಯನ್ನು ಬಳಸಿಕೊಂಡು ಸ್ಥಾಪಿಸಿರುವ ಇಂಥ ಸಂಸ್ಥೆಗಳೆಂದರೆ ವಾಷಿಂಗ್‍ಟನ್ನಿನ ಮೆಲ್ಲೋನ್ ಗ್ಯಾಲರಿ, ನ್ಯೂಯಾರ್ಕ್‍ನಲ್ಲಿರುವ ದಿ ಫ್ರಿಕ್ ಸಂಗ್ರಹಾಲಯ, ಬ್ರಜಿóಲ್‍ನ ಪ್ರಸಿದ್ಧ ಸಾವೊ ಪಾಲೋ ಮ್ಯೂಸಿಯಮ್ ಮೊದಲಾದವು. ಈ ಗ್ಯಾಲರಿಗಳೆಲ್ಲವೂ ಖಾಸಗಿ ವ್ಯಕ್ತಿಗಳು ಕಲಾಸಂಸ್ಥೆಗಳು ನೀಡಿದ ಉದಾರ ಕೊಡುಗೆಯ ಫಲಗಳಾಗಿವೆ.

	ಭಾರತದಲ್ಲಿ ಮೊದಲು ಮೊಗಲ್ ಮತ್ತು ರಜಪೂತರ ಕಾಲದಲ್ಲಿ ಚಿತ್ರಗಳನ್ನು ಬೇರೆಬೇರೆ ವ್ಯಕ್ತಿಗಳು ತಮ್ಮ ಸ್ವಂತ ಸಂಗ್ರಹಣೆಯಲ್ಲಿ ಇಟ್ಟುಕೊಳ್ಳುವ ಪರಿಪಾಟವಿತ್ತು. ಚಿತ್ರಶಾಲೆ ಎಂಬ ಸಾರ್ವಜನಿಕ ಸಂಸ್ಥೆಗಳು ಹುಟ್ಟಿಕೊಂಡಿದ್ದು ಸು.19 ನೆಯ ಶತಮಾನದಲ್ಲಿ. ಇವುಗಳಲ್ಲಿ ಅನೇಕವು ಪ್ರತ್ಯೇಕ ವ್ಯಕ್ತಿಗಳ ಸಂಗ್ರಹಗಳೇ ಆಗಿದ್ದವು. ಈಗ ಭಾರತದಲ್ಲಿ ಅನೇಕ ಚಿತ್ರಶಾಲೆಗಳಿವೆ. ಅವುಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ಹೆಸರಿಸಲು ಸಾಧ್ಯ. ಹೈದರಾಬಾದಿನಲ್ಲಿರುವ ಸಾಲಾರ್‍ಜಂಗ್ ಮ್ಯೂಸಿಯಮ್ಮಿನಲ್ಲಿ ಐರೋಪ್ಯ ಹಾಗೂ ಭಾರತೀಯ ಚಿತ್ರಕಲಾಕೃತಿಗಳ ಉತ್ತಮ ಸಂಗ್ರಹವಿದೆ. ಮುಂಬಯಿನ ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಮ್ಮಿನಲ್ಲಿ ಮಧ್ಯಕಾಲೀನ ಭಾರತದ ಹಾಗೂ ಆಧುನಿಕ ಕಾಲದ ಹಲವು ಚಿತ್ರಶೈಲಿಗಳ ಉತ್ತಮ ಉದಾಹರಣೆಗಳು ಪ್ರದರ್ಶನದಲ್ಲಿವೆ. ದೆಹಲಿಯ ನ್ಯಾಷನಲ್ ಮ್ಯೂಸಿಯಮ್‍ನಲ್ಲೂ ಕೆಲವು ಹಳೆಯ ಸಂಪ್ರದಾಯದ ಕಲಾಕೃತಿಗಳನ್ನು ಕಾಣಬಹುದು. ಇಲ್ಲಿಯ ಮ್ಯೂಸಿಯಮ್ ಆಫ್ ಮಾಡರ್ನ್ ಆರ್ಟ್‍ನಲ್ಲಿ ಆಧುನಿಕ ಸಂಪ್ರದಾಯಗಳ ವಿವಿಧ ಚಿತ್ರಗಳನ್ನು ಇಡಲಾಗಿದೆ. ಮದ್ರಾಸಿನ ಆರ್ಟ್ ಗ್ಯಾಲರಿ, ಕಲ್ಕತ್ತಾದ ವಿಕ್ಟೋರಿಯ ಸ್ಮಾರಕ ಭವನ, ತಂಜಾವೂರಿನ ಸರಸ್ವತಿ ಮಹಲ್, ತಿರುವನಂತಪುರದ ಶ್ರೀ ಚಿತ್ರಾಲಯಂ, ಬರೋಡದ ಚಿತ್ರಶಾಲೆ, ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಚಿತ್ರಶಾಲೆ-ಇವು ಪ್ರಸಿದ್ಧ ಚಿತ್ರಶಾಲೆಗಳು. 
ಭಾರತದಲ್ಲಿ ಈ ಚಿತ್ರಶಾಲೆಗಳಲ್ಲದೆ, ಪಾಕಿಸ್ತಾನದಲ್ಲಿನ ಕೆಲವು ಪ್ರಸಿದ್ಧ ಚಿತ್ರ ಸಂಗ್ರಹಾಲಯಗಳನ್ನೂ ಹೆಸರಿಸಬಹುದು. ಲಾಹೋರಿನ ಸೆಂಟ್ರಲ್ ಮ್ಯೂಸಿಯಮ್ಮಿನಲ್ಲಿ ಭಾರತೀಯ ಶಿಲ್ಪಕಲೆ ಹಾಗೂ ಚಿತ್ರಕಲೆಗೆ ಸಂಬಂಧಿಸಿದ ಕೆಲವು ಅಸದೃಶ ಕೃತಿಗಳಿವೆ. ಪೆಷಾವರ್‍ನಲ್ಲಿರುವ ಮ್ಯೂಸಿಯಮ್ಮಿನಲ್ಲಿ ಗಾಂಧಾರ ಶಿಲ್ಪಕಲೆಯನ್ನು ಪ್ರತಿನಿಧಿಸುವ ವಿಶಿಷ್ಟ ಚೆಲುವಿನ ಕೃತಿಗಳಿವೆ. ಕರಾಚಿಯ ನ್ಯಾಷನಲ್ ಮ್ಯೂಸಿಯಮ್ ಆಫ್ ಪಾಕಿಸ್ತಾನ್ ಸಂಗ್ರಹಾಲಯದಲ್ಲಿ ಭಾರತೀಯ ಕಲೆ ಮತ್ತು ಪ್ರಾಚ್ಯಶಾಸ್ತ್ರಗಳಿಗೆ ಸಂಬಂಧಿಸಿದ ವಸ್ತುಗಳನ್ನೂ, ಕಲಾವಶೇಷಗಳನ್ನು ಸಂರಕ್ಷಿಸಿ ಇಡಲಾಗಿದೆ.

	ಚಿತ್ರ ಸಂಗ್ರಹಣೆ : ಚಿತ್ರಗಳು ಮುಂತಾದ ಶ್ರೇಷ್ಠ ಕಲಾಕೃತಿಗಳನ್ನೂ ಸಾರ್ವಜನಿಕ ಸಂಗ್ರಹಾಲಯಗಳಲ್ಲಿ ಪ್ರದರ್ಶಿಸುವ ಸಂಪ್ರದಾಯ ಬೆಳೆಯುವುದಕ್ಕೆ ಮುಂಚೆ ಯುರೋಪಿನಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಖಾಸಗಿ ವ್ಯಕ್ತಿಗಳು ಅಮೂಲ್ಯ ಕಲಾವಸ್ತುಗಳನ್ನು ಶೇಖರಿಸಿಟ್ಟುಕೊಳ್ಳುತ್ತಿದ್ದುದುಂಟು, ಇದಕ್ಕೆ ಹಲವು ಕಾರಣಗಳಿರುತ್ತಿದ್ದುವು. ಕೆಲವರು ಕಲಾ ಪ್ರೇಮದಿಂದ ವಿವೇಚಾತ್ಮಕವಾಗಿ ಚಿತ್ರಗಳನ್ನು, ಶಿಲ್ಪಕೃತಿಗಳನ್ನು ಸಂಗ್ರಹಿಸುತ್ತಿದ್ದರೆ ಇನ್ನು ಕೆಲವರು ತಮ್ಮ ಸಿರಿ ಸಂಪತ್ತನ್ನು ಮೆರೆಯಿಸಲು, ತಮ್ಮ ಶ್ರೀಮಂತಿಕೆಯ ದ್ಯೋತಕವಾಗಿ ಕಲಾವಸ್ತುಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದುದುಂಟು. ಏನೇ ಆಗಲಿ, ಇಂಥ ಸ್ವಂತ ಸಂಗ್ರಹಣೆಗಳಿಂದ ಕಾಲ ಕ್ರಮೇಣ ಸಾರ್ವಜನಿಕ ಚಿತ್ರಶಾಲೆಗಳು, ಸಂಗ್ರಹಾಲಯಗಳೂ ಹುಟ್ಟಿ ಅದರಿಂದ ಕಲೆಯ ಮೇಲಿನ ಅಕ್ಕರೆ- ಆಸ್ಥೆಗಳು ಬೆಳೆಯಲು ನೆರವಾದವೆಂಬುದನ್ನು ಈಗಾಗಲೇ ವಿವೇಚಿಸಲಾಗಿದೆ. ಸಾವಿರಾರು ವರ್ಷಗಳಿಂದ ಬೆಳೆದುಬಂದ ಚಿತ್ರಸಂಗ್ರಹಣೆಯ ಇತಿಹಾಸವನ್ನು ಇಲ್ಲಿ ಸಂಕ್ಷೇಪವಾಗಿ ನೋಡಬಹುದು.

	ಕಲಾ ಸಂಗ್ರಹಣೆಯ ಉಗಮವನ್ನು ನಾವು ಪ್ರಪ್ರಥಮವಾಗಿ ಪ್ರಾಚೀನ ಗ್ರೀಸಿನಲ್ಲಿ ಕಾಣಬಹುದು; ಹೆಲೆನಿಸ್ಟಿಕ್ ಯುಗದಷ್ಟು ಪೂರ್ವದಲ್ಲೇ, ಅಂದರೆ ಕಿ.ಪೂ 138ರ ಸುಮಾರಿನಲ್ಲಿ ಪರ್ಗಮಮ್ ದೊರೆ ಎರಡನೆಯ ಅಟಿಲಸನದಲ್ಲಿ ಒಂದು ಅಪೂರ್ವ ಚಿತ್ರ ಸಂಗ್ರಹವಿತ್ತೆಂದು ಹೇಳುವುದುಂಟು. ರೋಮ್ ಮತ್ತು ಸೈರಾಕ್ಯೂಸ್ ಮುಂತಾದ ಕಡೆಗಳಲ್ಲಿ ಯುದ್ಧಗಳು ನಡೆದಾಗ ಅಮೂಲ್ಯ ಕಲಾವಸ್ತುಗಳನ್ನು ದೋಚಲೆಂದೇ ಹಲವು ಪ್ರಯತ್ನಗಳು ನಡೆದುದ್ದುಂಟು. ಹೀಗೆ ಕೊಳ್ಳೆ ಹೊಡೆದು ಹೇರಳವಾಗಿ ಕಲಾವಸ್ತುಗಳನ್ನು ಸಂಗ್ರಹಿಸಿದವರಲ್ಲಿ ಅಟಿಕಸ್, ಲುಕಲ್ಲಸ್, ಪಾಂಪೆ, ಜೂಲಿಯಸ್ ಸೀಸರ್, ವೆರ್ರಿಸ್ ಮುಂತಾದವರ ಹೆಸರುಗಳನ್ನು ಹೇಳಬಹುದು. ನೀರೋ ಚಕ್ರವರ್ತಿ ಬಳಿ ಜಗತ್ಪ್ರಸಿದ್ಧ ಕಲಾವಸ್ತುಗಳಿದ್ದವಂತೆ, ಲೋಕೋತ್ತರವಾದ ಕಲಾವಸ್ತುಗಳು ಖಾಸಗಿ ಸಂಗ್ರಹಣಾಲಯದಲ್ಲಿ ಅಡಗಿ ಯಾರ ಕಣ್ಣಿಗೂ ಕಾಣಿಸದೆ ನಶಿಸಿ ಹೋಗುತ್ತಿದೆ ಎಂದು ಪುರಾತನ ಇತಿಹಾಸಕಾರ ಪ್ಲಿನಿ ವ್ಯಥೆಪಟ್ಟಿದ್ದಾನೆ.

	ಪುರಾತನ ಚೀನಾದ ರಾಜರು ಇಂಥ ಹೇರಳವಾದ ಸಂಗ್ರಹಣೆಯಲ್ಲಿ ತೊಡಗಿರುತ್ತಿದ್ದರು. ಜಪಾನಿನ ನಾರಾದಲ್ಲಿನ ರಾಜಭಂಡಾರದಲ್ಲಿ ಕ್ರಿ. ಶ. ಎಂಟನೆಯ ಶತಮಾನದ ನೂರಾರು ಬುದ್ಧ ವಿಗ್ರಹಗಳು ಇದ್ದವು. ರಾಜಮನೆತನಗಳು ನಾಶವಾದಾಗ ಇಂಥ ಬೆಲೆಬಾಳುವ ಸಂಗ್ರಹಣೆಗಳೂ ನಷ್ಟಕ್ಕೀಡಾದವು.

	ಆಫ್ರಿಕದಲ್ಲಿ, ಮಧ್ಯಯುಗದ ಯೂರೋಪಿನಲ್ಲಿ ರಾಜರುಗಳ ಆಸ್ಥಾನ ಹಾಗೂ ಚರ್ಚುಗಳ ಸಲುವಾಗಿ ಹಲವು ಕಲಾಕೃತಿಗಳನ್ನು ತಯಾರಿಸಿ ಸಂಗ್ರಹಿಸುತ್ತಿದ್ದುದುಂಟು. ಹಲವು ಚರ್ಚುಗಳಲ್ಲಿ ಹಾಗೂ ಸಂನ್ಯಾಸಿ ಮಠಗಳಲ್ಲಿ ಚಿತ್ರಗಳು, ಶಿಲ್ಪಕೃತಿಗಳು, ಹಸ್ತಪ್ರತಿಗಳು, ಪವಿತ್ರ ಅವಶೇಷಗಳು, ಕಂಚಿನ ಹಾಗೂ ದಂತದ ಆಕೃತಿಗಳು ಮುಂತಾದ ವಸ್ತುಗಳನ್ನು ಕೂಡಿಸಿ ಇಡಲಾಗಿತ್ತು.

	ಮಧ್ಯಯುಗದ ಸಂಗ್ರಹಣೆಗಳನ್ನು ನೋಡುವಾಗ ಸಂಗ್ರಹಣಕಾರರಿಗೆ ವಿವೇಚನಾತ್ಮಕವಾದ ಕಲಾಪ್ರೇಮವಿತ್ತೆಂದು ಹೇಳಲು ಬರುವುದಿಲ್ಲ. ರತ್ನ, ಮಣಿ, ವಜ್ರ, ವೈಢೂರ್ಯಗಳ ಜೊತೆಯಲ್ಲೇ ಚಿತ್ರಗಳನ್ನೂ, ಶಿಲ್ಪಕೃತಿಗಳನ್ನು ರಾಶಿ ಹಾಕಿದುದನ್ನು ನೋಡುವಾಗ ಲಲಿತ ಕಲಾವಸ್ತುಗಳ ಬಗ್ಗೆ ಅವರಲ್ಲಿ ವಿಶಿಷ್ಟ ಆಸ್ಥೆಯಿತ್ತೇ ಎಂದು ಹೇಳುವುದು ಕಷ್ಟ. ಆದರೆ ರೆನೆಸಾನ್ಸ್ ಯುಗದಲ್ಲಿ ಮಾನವತಾವಾದದ ದೆಸೆಯಿಂದ ಸಾಹಿತ್ಯ, ಕಲೆ ಮೊದಲಾದುವನ್ನು ಕುರಿತು ವಿಶೇಷವಾದ ಅಭಿರುಚಿ-ಆಸಕ್ತಿಗಳು ಹುಟ್ಟಿದವೆಂದು ಹೇಳಬಹುದು. ಫ್ರೆಡ್ರೆರಿಕ್ ಆಫ್ ಹೋಹೆನ್ ಸ್ಟಾಫನ್ (1220-50) ರಿಯೆಂಜೋó, ಪೆಟ್ರಾರ್ಕ, ಪ್ರಾಗ್‍ನ ಚಕ್ರವರ್ತಿ ಎರಡನೆಯ ರೂಡಾಲ್ಫ (1552-1612) ಮುಂತಾದವರ ಖಾಸಗಿ ಸಂಗ್ರಹಣಾ ಶಾಲೆಗಳು ಜಗತ್ಪ್ರಸಿದ್ದವಾದುವು.

	ಇಟಲಿಯ ಹ್ಯೂಮನಿಸ್ಟ್ ಪಂಥದ ರಾಜರುಗಳು ಮೆಡಿಚಿ, ಎಸ್ತ್, ಗೊಂಜಾಗೋ ಮುಂತಾದ ಮನೆತನದ ಶ್ರೀಮಂತ ಅರಸರುಗಳು ವಿಶೇಷವಾದ ಕಲಾರುಚಿಯುಳ್ಳವರಾಗಿದ್ದು ಬಹಳ ಶ್ರೇಷ್ಠವಾದ ಕಲಾವಸ್ತುಗಳನ್ನು ಸಂಪಾದಿಸಿದ್ದರು. ಇದರಿಂದ ರೆನೆಸಾನ್ಸ್ ಯುಗದಲ್ಲಿ ಕಲೆಯ ಹಿರಿಮೆ-ಗರಿಮೆಗಳು ಹೆಚ್ಚಿ ನೂರಾರು ಖಾಸಗಿ ಸಂಗ್ರಹಾಲಯಗಳು ಹುಟ್ಟಿಕೊಂಡವು. ಹಲವು ವರ್ಷ ಯಾರ ಕಣ್ಣಿಗೂ ಬೀಳದೆ ನಿರ್ಲಕ್ಷಿಸಲ್ಪಟ್ಟಿದ್ದ ಶ್ರೇಷ್ಠ ಚಿತ್ರಗಳು ಜನರ ಕಣ್ಣನ್ನು ಸೆಳೆಯುವಂತಾದವು. ಅದೇ ಕಾಲದ ಯೂರೋಪಿನಲ್ಲಿ ಕಲಾವಸ್ತುಗಳನ್ನು, ಅದರಲ್ಲೂ ಪುರಾತನ ಚಿತ್ರಗಳನ್ನು, ಹೇರಳವಾಗಿ ಹಣಕೊಟ್ಟು ಕೊಳ್ಳುವ ರೂಢಿಯೂ ಬೆಳೆಯಿತು. ಮೊದಲನೆಯ ಚಾಲ್ರ್ಸ ದೊರೆ ಮ್ಯಾಮಟುವ ಡ್ಯೂಕರುಗಳ ಮನೆತನದ ಇಡೀ ಖಾಸಗಿ ಚಿತ್ರಸಂಗ್ರಹಾಲಯವನ್ನೇ ಕೊಂಡುಕೊಂಡ.

	ಹದಿನೆಂಟನೆಯ ಶತಮಾನದಲ್ಲಿ ಹಲವಾರು ಖಾಸಗಿ ವ್ಯಕ್ತಿಗಳು ತಮ್ಮ ಆಡಂಬರದ ಸಿರಿವಂತಿಕೆಯನ್ನು ಪ್ರದರ್ಶಿಸಲೆಂದೇ ಚಿತ್ರಗಳನ್ನು ಸಂಗ್ರಹಿಸಲು ಪ್ರಾರಂಭಿಸಿದರು. ಏನೊಂದು ಅಭಿರುಚಿಯಿಲ್ಲದ ಇಂಥ ಮೂಡರು ಕಲೆಯ ವಿಷಯವಾಗಿ ಗಳಹುತ್ತಾ ಅಪಹಾಸ್ಯಕ್ಕೀಡಾಗುತ್ತಿದ್ದ ಸಂಗತಿಯನ್ನು ಆ ಕಾಲದ ವಿಡಂಬನ ಸಾಹಿತ್ಯದಲ್ಲಿ ನಾವು ನೋಡಬಹುದು.

	ಕೆಲವು ಸುಸಂಸ್ಕøತ ವ್ಯಕ್ತಿಗಳು ಕಲೆಯನ್ನು ಜನಪ್ರಿಯಗೊಳಿಸಿ ಜನರನ್ನು ಸುಶಿಕ್ಷಿತರನ್ನಾಗಿ ಮಾಡಲು ಪ್ರಯತ್ನಿಸಿದ್ದುಂಟು. ಮೆಡಿಚಿ ಮನೆತನದ ಕಟ್ಟ ಕಡೆಯ ಪ್ರತಿನಿಧಿ ಆನ ಲುಡೋವಿಕ ಎಂಬ ರಾಜಕುಮಾರಿ 1747ರಲ್ಲಿ ಒಂದು ಆಜ್ಞೆ ಹೊರಡಿಸಿ ಸಾರ್ವಜನಿಕ ಕಲಾಪ್ರದರ್ಶನವನ್ನು ಏರ್ಪಡಿಸಿದಳು. ಚಕ್ರವರ್ತಿನಿ ಮರೆಯಾ ತೆರೆಸಾ ತನ್ನ ಲುಕ್ಸೆಂಬರ್ಗ್ ಅರಮನೆಯ ಚಿತ್ರ ಶಾಲೆಯನ್ನು ಸಾರ್ವಜನಿಕರ ಸಲುವಾಗಿ ಪ್ರದರ್ಶನಕ್ಕೆ ತೆರೆದಿಟ್ಟಳು.

	ಫ್ರಾನ್ಸಿನ ಮಹಾಕ್ರಾಂತಿಯ ಅನಂತರ ಇಂಥ ಖಾಸಗಿ ಸಂಗ್ರಹಾಲಯಗಳು ಸರ್ಕಾರದ ವಶಕ್ಕೆ ಬಂದು ಸಾರ್ವಜನಿಕರಲ್ಲಿ ಕಲೆಯ ಬಗ್ಗೆ ಆಸ್ಥೆ ಮೂಡಿಸಲು ನೆರವಾದವು.

	ಪ್ರಜಾರಾಜ್ಯಗಳ ಕಾಲದಲ್ಲೂ ಖಾಸಗಿ ಚಿತ್ರಸಂಗ್ರಹಾಲಯಗಳು ತಮ್ಮ ಉಪಯುಕ್ತತೆಯನ್ನು ಕಳೆದುಕೊಳ್ಳಲ್ಲಿಲ್ಲ. ಕಲೆಯ ಗಂಧವೇ ಇಲ್ಲದ ಅಧಿಕಾರಿಗಳು ಹುಚ್ಚು ಕಾರುಬಾರು ನಡೆಸುತ್ತಿದ್ದಾಗ ಕಲೆಯು ಸಂಪೂರ್ಣವಾಗಿ ನಾಶವಾಗದಂತೆ ನೋಡಿಕೊಂಡವರು ಕಲಾಸಕ್ತಿಯುಳ್ಳ ಖಾಸಗಿ ವ್ಯಕ್ತಿಗಳು.

	ಖಾಸಗಿ ಸಂಗ್ರಹಾಲಯಗಳು ಇನ್ನೊಂದು ವಿಶೇಷವಾದ ಸಾಧನೆಯನ್ನು ಕೈಗೂಡಿಸಿದವು. ಸಂಪ್ರದಾಯ ಶಿಲಾಯುಗದಲ್ಲಿ ಹೊಸ ಹೊಸ ಪ್ರವೃತ್ತಿಗಳೂ ಅಭಿರುಚಿಗಳೂ ಹುಟ್ಟಿ ನವ್ಯಕೃತಿಗಳ ರಚನೆ ಆದಾಗ ಅವುಗಳಿಗೆ ಅಧಿಕಾರಯುತವಾದ ಮನ್ನಣೆ ದೊರೆಯುವುದು ಕಷ್ಟ. ಆದ್ದರಿಂದ ಹೊಸ ಶೈಲಿಯ (ಆವಾಂತ್ ಗಾರ್ಡ್) ನವ್ಯ ಚಿತ್ರಗಳಿಗೆ ಸಾರ್ವಜನಿಕ ಚಿತ್ರಶಾಲೆಗಳಲ್ಲಿ ಪ್ರದರ್ಶನಾವಕಾಶ ಸಿಕ್ಕಬೇಕಾದರೆ ಬಹುಕಾಲ ಹಿಡಿಯುತ್ತದೆ. ಅಂಥ ಸಂದರ್ಭಗಳಲ್ಲಿ ಹೊಸ ಚಿತ್ರಗಳು ಮೊದಲು ಖಾಸಗಿ ಸಂಗ್ರಹಾಲಯದಲ್ಲಿದ್ದದ್ದು ಕ್ರಮೇಣ ಹತ್ತು ಜನರ ಆಸಕ್ತಿಯನ್ನು ಕೆರಳಿಸಿ ಆಮೇಲೆ ಜನಪ್ರಿಯವಾದ ನಿದರ್ಶನಗಳಿವೆ. ಉದಾಹರಣೆಗೆ, ಯೂರೋಪಿನ ಇಂಪ್ರೆಷನಿಸ್ಟ ಮತ್ತು ಪೋಸ್ಟ್ ಇಂಪ್ರೆಷನಿಸ್ಟ ಪಂಥದ ಚಿತ್ರಕಾರರು ಪ್ರಸಿದ್ಧಿಗೆ ಬಂದದ್ದು ಹೀಗೆಯೇ. (ನೋಡಿ- ಚಿತ್ರಕಲೆ) ಜಪಾನಿನ ಬಣ್ಣದ ಪ್ರಿಂಟುಗಳು, ಆಫ್ರಿಕಾದ ಶಿಲ್ಪಕಲೆ, ಪುರಾತನ ಅಮೇರಿಕನ್ ಕಲೆ, ಓಷಿಯಾನಿಯಾದ ಲಲಿತಕಲೆಗಳು, ಇಂಡೋಚೀನ, ಭಾರತ ಮುಂತಾದ ರಾಷ್ಟ್ರಗಳ ದೇಶೀಯ ಕಲೆಗಳು ಬೆಳಕಿಗೆ ಬಂದು ಜನಪ್ರಿಯವಾದುದು ಹೀಗೆಯೇ. ಇಟಲಿಯ ಜಗದ್ವಿಖ್ಯಾತ ಚಿತ್ರಕೃತಿಗಳು ರಾಷ್ಟ್ರೀಯ ಚಿತ್ರಶಾಲೆಗಳಲ್ಲಿ ಪ್ರದರ್ಶಿತವಾಗುವುದಕ್ಕೆ ಮುಂಚೆಯೇ ಶತಮಾನಗಳ ಹಿಂದೆಯೇ ಅವು ಖಾಸಗಿ ವ್ಯಕ್ತಿಗಳ ಸಂಗ್ರಹಾಲಯವನ್ನು ಅಲಂಕರಿಸಿದ್ದವು. ಹತ್ತೊಂಬತ್ತನೆಯ ಶತಮಾನದ ಶ್ರೇಷ್ಠ ಫ್ರೆಂಚ್ ಕಲಾವಿದರ ಕೃತಿಗಳನ್ನು ಕೊಳ್ಳಲು ಸರ್ಕಾರಿ ಚಿತ್ರಶಾಲೆಗಳು ಹಿಂದು ಮುಂದು ನೋಡುತ್ತಿದ್ದಾಗ ಇಂಗ್ಲೆಂಡಿನ ಸರ್ ಹ್ಯೂಲೇನ್, ಮಿಸೆಸ್ ಡೇವಿಸ್ ಮುಂತಾದ ಸಂಗ್ರಹಣಕಾರರು ಆ ಕಾಲದ ಅಮೂಲ್ಯ ಚಿತ್ರಗಳನ್ನು ದುಬಾರಿ ಬೆಲೆ ತೆತ್ತು ಸಂಗ್ರಹಿಸಿದ್ದರು. ಇಂದಿಗೂ ಇಂಗ್ಲೆಂಡಿನಲ್ಲಿ ಅತ್ಯುತ್ತಮ ಇಟಾಲಿಯನ್ ಚಿತ್ರಕೃತಿಗಳನ್ನು ನೋಡಬೇಕೆಂದರೆ, ಅವನ್ನು ಮತ್ತೆ ಹೊಸದಾಗಿ ಗುರುತಿಸಿ ಲೋಕದ ಕಣ್ಣನ್ನು ಅವುಗಳತ್ತ ಸೆಳೆದ ಉತ್ಸಾಹಿ ಸಂಗ್ರಹಣಕಾರರ ಖಾಸಗಿ ಚಿತ್ರಶಾಲೆಗಳಿಗೆ ಹೋಗಬೇಕು.

	ಈ ಎಲ್ಲಾ ಸಂಗತಿಗಳಿಂದ ಒಂದು ವಿಷಯ ವ್ಯಕ್ತವಾಗುತ್ತದೆ. ಅದೇನೆಂದರೆ ಸಾರ್ವಜನಿಕ ಚಿತ್ರಶಾಲೆಗಳು ಜನರ ಅಭಿರುಚಿಯನ್ನು ಬೆಳೆಸಿ ಹೆಚ್ಚಿಸಲು ಸರ್ಕಾರವು ಹಣವನ್ನು ಖರ್ಚುಮಾಡುವುದು ನ್ಯಾಯಸಮ್ಮತವಾಗಿದೆ. ಆದರೆ ಕಲಾಭಿರುಚಿಯ ಪರಂಪರೆಯನ್ನು ಬೆಳಸುವುದರಲ್ಲಿ ಖಾಸಗಿ ಸಂಗ್ರಹಣಕಾರರು ಅನನ್ಯ ಪಾತ್ರ ವಹಿಸುತ್ತಾ ಬಂದಿದ್ದಾರೆ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು.

	ಯೂರೋಪಿನಲ್ಲಿ 1930ರ ಅನಂತರ ಸಾರ್ವಜನಿಕ ಚಿತ್ರಶಾಲೆಗಳು ಖಾಸಗಿ ಸಂಗ್ರಹಣೆಯಿಂದ ಆಯ್ದುಕೊಂಡ ಶ್ರೇಷ್ಠ ಕೃತಿಗಳನ್ನು ಪ್ರತ್ಯೇಕವಾಗಿ ಪ್ರದರ್ಶಿಸುವುದರ ಮೂಲಕ ಅವು ಖಾಸಗಿ ಸಂಗ್ರಹಣಾಲಯಗಳ ಸಾಧನೆಯ ಮೇಲೆ ಅಂಗೀಕಾರದ ಮುದ್ರೆಯೊತ್ತಿವೆ ಎಂಬುದು ಇದರಿಂದ ಖಚಿತವಾಗುತ್ತದೆ.						(ಎಚ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ